ಬಾಲಿವುಡ್ ನಟಿ ಹಾಗೂ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿಯೂ ಅವರ ಉಡುಪಿನ ವಿಚಾರಕ್ಕಲ್ಲ, ಬದಲಾಗಿ ತಾವು ವಾಸವಿರುವ ಮುಂಬೈನ ಅಪಾರ್ಟ್ಮೆಂಟ್ ಸೊಸೈಟಿ ಕಮಿಟಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಸುದ್ದಿಯಾಗಿದ್ದಾರೆ.
ತಮ್ಮ ಸ್ವಂತ ಮನೆಯಲ್ಲೇ ಶೂಟಿಂಗ್ ಅಥವಾ ರೀಲ್ಸ್ ಮಾಡುವುದನ್ನು ಸೊಸೈಟಿ ಮಂಡಳಿಯು ಕಾನೂನುಬಾಹಿರ ಎಂದು ತಡೆದಿದೆ ಮತ್ತು ಮನೆಗೆ ಬರುವ ಅತಿಥಿಗಳನ್ನು ಅಕ್ರಮವಾಗಿ ತಡೆಯಲಾಗುತ್ತಿದೆ ಎಂದು ಉರ್ಫಿ ಜಾವೇದ್ ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಏನಿದು ಘಟನೆ? ಉರ್ಫಿ ಅವರಿಗೆ ಸೊಸೈಟಿಯಿಂದ ನೀಡಲಾದ ನೋಟಿಸ್ನ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದು, “ನನ್ನ ಸ್ವಂತ ಫ್ಲಾಟ್ನಲ್ಲಿ ರೀಲ್ಸ್ ಶೂಟ್ ಮಾಡುವುದು ಅಪರಾಧವಂತೆ!” ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಸೆಕ್ಯೂರಿಟಿ ಸಿಬ್ಬಂದಿ ಜೊತೆ ವಾದ ಮಾಡುತ್ತಿರುವ ದೃಶ್ಯವಿದ್ದು, ಯೂಟ್ಯೂಬ್ ಶೂಟಿಂಗ್ಗಾಗಿ ಬಂದಿದ್ದ ಅತಿಥಿಗಳನ್ನು ಮತ್ತು ಅವರ ತಂಡವನ್ನು ಗೇಟ್ನಲ್ಲೇ ತಡೆದು, ಅವರ ಬ್ಯಾಗ್ ಹಾಗೂ ಸಾಮಗ್ರಿಗಳನ್ನು ಅಕ್ರಮವಾಗಿ ತಪಾಸಣೆ ಮಾಡಲಾಗಿದೆ ಎಂದು ದೂರಿದ್ದಾರೆ.
ಸಂಜೆ 6 ಗಂಟೆಯ ನಂತರ ಮನೆಗೆ ಯಾರೇ ಅತಿಥಿಗಳು ಬಂದರೂ ಮಾಲೀಕರ ಅನುಮತಿ ಪಡೆಯಬೇಕು ಎಂಬ ನಿಯಮವನ್ನು ಪ್ರಶ್ನಿಸಿ ತಾವು ಪೊಲೀಸರಿಗೆ ದೂರು ನೀಡಿದ್ದೇ ಈ ಎಲ್ಲಾ ಕಿರುಕುಳಕ್ಕೆ ಕಾರಣ ಎಂದು ಉರ್ಫಿ ಹೇಳಿದ್ದಾರೆ. “ಸಾಮಾಜಿಕ ಜಾಲತಾಣಗಳಲ್ಲಿ ಶೂಟಿಂಗ್ ವಿಡಿಯೋ ಹಾಕುವುದು ವಾಣಿಜ್ಯ ಬಳಕೆಯಾಗುತ್ತದೆ ಎಂಬ ವಿಚಿತ್ರ ಕಾರಣ ನೀಡಿ ಕಮಿಟಿ ನನ್ನನ್ನು ಪೀಡಿಸುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
ತಮ್ಮ ಮನೆಗೆ ಕೆಮೆರಾ ಅಥವಾ ಶೂಟಿಂಗ್ ಸಲಕರಣೆ ತರುವವರನ್ನು ಸೊಸೈಟಿಯ ಕೆಲವರು ಗೇಟ್ನಲ್ಲಿ ತಡೆದು ಕಿರುಕುಳ ನೀಡುತ್ತಿದ್ದಾರೆ. ಈ ರೀತಿಯ ಮಾನಸಿಕ ಕಿರುಕುಳ ನೀಡುತ್ತಿರುವವರ ಮುಖವನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿ ಉರ್ಫಿ ಎಚ್ಚರಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಕಂಟೆಂಟ್ ಕ್ರಿಯೇಟ್ ಮಾಡುತ್ತಾರೆ, ಹಾಗಿದ್ದಾಗ ಈ ನಿಯಮ ಹೇಗೆ ಕಾನೂನುಬದ್ಧವಾಗುತ್ತದೆ ಎಂದು ಅವರು ಸೊಸೈಟಿಯ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.